ತಾಮ್ಸನ್, ಜೋಸೆಫ್
	1858-1895.   ಸ್ಕಾಟಿಷ್ ಪ್ರವಾಸಿ, ಭೂವಿಜ್ಞಾನಿ, ಸಸ್ಯವಿಜ್ಞಾನಿ, ಪೂರ್ವ ಆಫ್ರಿಕದ ಹಲವು ಪ್ರದೇಶಗಳನ್ನು ಪ್ರವೇಶಿಸಿದ ಪ್ರಥಮ ಐರೋಪ್ಯ. ಈತ ಬರೆದಿರುವ ಲೇಖನಗಳು ಭೂವಿಜ್ಞಾನಕ್ಕೆ ಗಮನಾರ್ಹ ಕೊಡುಗೆಗಳಾಗಿವೆ. ಜನನ 1858ರ ಫೆಬ್ರವರಿ 14ರಂದು, ಡಂಫ್ರೀಷೈರ್‍ನ ಪೆನ್‍ಪಾಂಟ್‍ನಲ್ಲಿ. ಎಡಿನ್‍ಬರೊ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನವನ್ನು ಅಧ್ಯಯನ ಮಾಡಿ, 1878ರಲ್ಲಿ ರಾಯಲ್ ಭೂಗೋಳಶಾಸ್ತ್ರ ಸಂಘದಿಂದ ಭೂವಿಜ್ಞಾನ ಹಾಗೂ ಪ್ರಕೃತಿಶಾಸ್ತ್ರಜ್ಞನಾಗಿ ನೇಮಕವಾದ.  ಈತನನ್ನು ಅದೇ ವರ್ಷ ಆಫ್ರಿಕದ ಭೂಭಾಗಗಳ ಅನ್ವೇಷಣೆಗೆಂದು ಅಲೆಗ್ಸಾಂಡರ್ ಕೀತ್ ಜಾನ್‍ಸ್ಟನನ ನಾಯಕತ್ವದಲ್ಲಿ ಆಫ್ರಿಕಕ್ಕೆ ಕಳುಹಿಸಿಲಾಯಿತು. ಜಾನ್‍ಸ್ಟನನ ಮರಣದಿಂದಾಗಿ (ಜೂನ್. 28,1879) ಈತನೇ ತಂಡದ ನಾಯಕನಾದ.  ನ್ಯಾಸ ಸರೋವರದ ಉತ್ತರದ ತುದಿಯ ವರೆಗಿನ ಪ್ರದೇಶದಲ್ಲಿ ಪ್ರವಾಸ ಮಾಡಿ ಅನಂತರ ಟ್ಯಾಂಗನೀಕ ಸರೋವರವನ್ನು ತಲಪಿದ. ಕಾಂಗೋವನ್ನು ತಲಪುವ ಈತನ ಪ್ರಯತ್ನದಲ್ಲಿ ಅಡಚಣೆಗಳುಂಟಾದ್ದರಿಂದ 1880ರ ಜುಲೈ 10 ರಂದು ಹಿಂದಿರುಗಿದ.  ಮಾರ್ಗದಲ್ಲಿ ರುಕ್ವ ಸರೋವರದ ಆವಿಷ್ಕಾರ ಮಾಡಿದ.  

	ಪೂರ್ವ ಆಫ್ರಿಕನ್ ತೀರಪ್ರದೇಶದಿಂದ ನೈಲ್ ನದಿಯ ಮೂಲದ ವರೆಗೆ ಅತ್ಯಂತ ಹತ್ತಿರುವ ಮಾರ್ಗವೊಂದನ್ನು ಕಂಡುಹಿಡಿಯಲು 1882ರಲ್ಲಿ ರಾಯಲ್ ಭೂಗೋಳಶಾಸ್ತ್ರ ಸಂಘ ಈತನ ನಾಯಕತ್ವದಲ್ಲಿ ಮತ್ತೊಂದು ಪ್ರವಾಸವನ್ನೇರ್ಪಡಿಸಿತು.  ಇದು ತಾಮ್ಸನನ ಅತ್ಯಂತ ಮುಖ್ಯ ಪ್ರವಾಸವಾಯಿತು.  ತಾಮ್ಸನ್ ಮೊಂಬಾಸದಿಂದ ಹೊರಟು ಕಿಲಿಮಂಜಾರೊ ಪರ್ವತದ ಮೂಲಕ ಸಾಗಿ ಬರಿಂಗೋ ಸರೋವರವನ್ನು ಕಂಡುಹಿಡಿದ.  1882ರ ಡಿಸೆಂಬರ್ 10 ರಂದು ನೈಲ್ ನದಿಯ ಉಗಮಸ್ಥಾನವಾದ ವಿಕ್ಟೋರಿಯ ಸರೋವರವನ್ನು ತಲಪಿದ. 

	1885-1891 ರ ಅವಧಿಯಲ್ಲಿ ಈಗಿನ ನೈಜೀರಿಯ, ಮೊರಾಕೊ, ನ್ಯಾಸಾ ಲ್ಯಾಂಡ್‍ಗಳಿರುವ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಆ ಪ್ರದೇಶಗಳ ಪ್ರಮುಖರಿಂದ ಬ್ರಿಟನ್ನಿಗಾಗಿ ವ್ಯಾಪಾರ ಹಾಗೂ ಗಣಿಗಾರಿಕೆ ಹಕ್ಕುಗಳನ್ನು ಪಡೆದ. 

	ತಾಮ್ಸನ್ 1890ರಲ್ಲಿ ಸೆಸಿಲ್ ರೋಡ್ಸನ ಬ್ರಿಟಿಷ್ ಕಂಪನಿಯ ಸೇವೆಗೆ ಸೇರಿದ.  ಈಗ eóÁಂಬಿಯ ಇರುವ ಪ್ರದೇಶಗಳೊಂದಿಗೆ ದಕ್ಷಿಣ ಆಫ್ರಿಕ ಗಣಿಗಾರಿಕೆ ಹಾಗೂ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡ.  1891 ರಲ್ಲಿ ಅನಾರೋಗ್ಯ ನಿಮಿತ್ತ ಗೇಟ್ ಲಾಬ್ರಿeóïಗೆ ಹಿಂದಿರುಗಿದ ಈತ 1895ರ ಆಗಸ್ಟ್ 2 ರಂದು ಲಂಡನ್‍ನಲ್ಲಿ  ನಿಧನ ಹೊಂದಿದ. ಆಫ್ರಿಕದ ಕೆಲವು ಪ್ರದೇಶಗಳ ಭೂವಿಜ್ಞಾನ, ಭೂಗೋಳ ಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರಗಳಿಗೆ ಸಂಬಂಧಿಸಿದ ಅನೇಕ ಅಂಶಗಳು ಇವನ ಪ್ರವಾಸದ ಟಿಪ್ಪಣಿಗಳಿಂದ ದೊರೆಯುತ್ತವೆ.  ತಾಮ್ಸನ್ಸ್ ಗeóÉಲ್ ಎಂದು, ಪೂರ್ವ ಆಫ್ರಿಕದ ಪ್ರಖ್ಯಾತ ಗಜೆಲ್‍ಗೆ ಇವನ ಹೆಸರನ್ನೇ ಇಡಲಾಗಿದೆ.  ಟು ದಿ ಸೆಂಟ್ರಲ್ ಆಫ್ರಿಕನ್ ಲೇಕ್ಸ್ ಅಂಡ್ ಬ್ಯಾಕ್ (1881), ತ್ರೂ ಮಾಸೈ ಲ್ಯಾಂಡ್ (1885), ಟ್ರಾವೆಲ್ಸ್ ಇನ್ ದಿ ಅಟ್ಲಾಸ್ ಅಂಡ್ ಸದರ್ನ್ ಮೊರಾಕೊ (1889) -ಇವು ಈತನ ಪ್ರಮುಖ ಬರಹಗಳು.  (ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ